ಕಿರುಕುಳ ಮತ್ತು ಸೈಬರ್ ನಿಂದನೆ ಕುರಿತಾದ ನೀತಿಗಳು

ನಮ್ಮ ರಚನೆಕಾರರು, ವೀಕ್ಷಕರು ಹಾಗೂ ಪಾಲುದಾರರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ಈ ಅನನ್ಯ ಮತ್ತು ಉತ್ಸಾಹಶೀಲ ಸಮುದಾಯವನ್ನು ರಕ್ಷಿಸಲು ನಿಮ್ಮಲ್ಲಿ ಪ್ರತಿಯೊಬ್ಬರಿಂದಲೂ ಸಹಾಯವನ್ನು ನಿರೀಕ್ಷಿಸುತ್ತೇವೆ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು, ಮತ್ತು YouTube ಅನ್ನು ಸುರಕ್ಷಿತವಾಗಿರಿಸುವ ನಮ್ಮ ಹಂಚಿಕೊಂಡ ಜವಾಬ್ದಾರಿಯಲ್ಲಿ ಅವುಗಳು ನಿರ್ವಹಿಸುವ ಪಾತ್ರವನ್ನು ನೀವು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಕೆಳಗಿನ ನೀತಿಯನ್ನು ಎಚ್ಚರಿಕೆಯಿಂದ ಓದಲು ಸಮಯ ತೆಗೆದುಕೊಳ್ಳಿ. ನಮ್ಮ ಮಾರ್ಗಸೂಚಿಗಳ ಸಂಪೂರ್ಣ ಪಟ್ಟಿಗಾಗಿ ನೀವು ಈ ಪುಟವನ್ನು ಸಹ ನೋಡಬಹುದು.

ಯಾವುದೇ ವ್ಯಕ್ತಿಯ ವಯಸ್ಸು, ಅಂಗವೈಕಲ್ಯ, ಜನಾಂಗೀಯತೆ, ಲಿಂಗ, ಲೈಂಗಿಕ ದೃಷ್ಟಿಕೋನ ಅಥವಾ ಜನಾಂಗದಂತಹ ದೈಹಿಕ ಲಕ್ಷಣಗಳು ಅಥವಾ ಸಂರಕ್ಷಿತ ಗುಂಪಿನ ಸ್ಥಿತಿಯನ್ನು ಆಧರಿಸಿ ಅವರನ್ನು ಸುದೀರ್ಘವಾದ ಅವಮಾನಗಳು ಅಥವಾ ನಿಂದನೆಗಳಿಗೆ ಗುರಿಯಾಗಿಸುವ ಕಂಟೆಂಟ್ ಅನ್ನು ನಾವು ಅನುಮತಿಸುವುದಿಲ್ಲ. ಬೆದರಿಕೆಗಳು ಅಥವಾ ಡಾಕ್ಸಿಂಗ್‌ನಂತಹ ಇತರ ಹಾನಿಕಾರಕ ನಡವಳಿಕೆಗಳನ್ನು ಸಹ ನಾವು ಅನುಮತಿಸುವುದಿಲ್ಲ. ಅಪ್ರಾಪ್ತರನ್ನು ಗುರಿಯಾಗಿಸುವ ಕಂಟೆಂಟ್ ಜೊತೆ ನಾವು ಕಠಿಣವಾಗಿ ವ್ಯವಹರಿಸುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.

ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್ ನಿಮಗೆ ಕಂಡುಬಂದರೆ, ಅದನ್ನು ವರದಿ ಮಾಡಿ. ನಮ್ಮ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳನ್ನು ವರದಿ ಮಾಡುವುದರ ಕುರಿತ ಸೂಚನೆಗಳು ಇಲ್ಲಿ ಲಭ್ಯವಿವೆ. ನೀವು ವರದಿ ಮಾಡಲು ಬಯಸುವ ಹಲವಾರು ವೀಡಿಯೊಗಳು ಅಥವಾ ಕಾಮೆಂಟ್‌ಗಳು ನಿಮಗೆ ಕಂಡುಬಂದರೆ, ನೀವು ಚಾನಲ್ ಅನ್ನು ವರದಿ ಮಾಡಬಹುದು. ಸುರಕ್ಷಿತರಾಗಿರುವುದು, ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸುವುದು ಮತ್ತು ನಿಮ್ಮ ಗೌಪ್ಯತೆಯನ್ನು ರಕ್ಷಿಸುವುದು ಹೇಗೆ ಎಂಬ ಕುರಿತು ಸಲಹೆಗಳಿಗಾಗಿ, ರಚನೆಕಾರರ ಸುರಕ್ಷತಾ ಕೇಂದ್ರ ಮತ್ತು YouTube ನಲ್ಲಿ ಸುರಕ್ಷಿತರಾಗಿರಿ ಎಂಬುದನ್ನು ಪರಿಶೀಲಿಸಿ.

ನಿಮ್ಮ ವಿರುದ್ಧ ನಿರ್ದಿಷ್ಟ ಬೆದರಿಕೆಗಳನ್ನು ಮಾಡಲಾಗಿದ್ದರೆ ಮತ್ತು ನಿಮಗೆ ಅಸುರಕ್ಷಿತ ಭಾವನೆಯಿದ್ದರೆ, ಅದನ್ನು ನೇರವಾಗಿ ನಿಮ್ಮ ಸ್ಥಳೀಯ ಕಾನೂನು ಜಾರಿಗೊಳಿಸುವಿಕೆ ಏಜೆನ್ಸಿಗೆ ವರದಿ ಮಾಡಿ.

ಈ ನೀತಿ ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿದೆ

ನೀವು ಕಂಟೆಂಟ್ ಅನ್ನು ಪೋಸ್ಟ್ ಮಾಡುತ್ತಿರುವಿರಿ ಎಂದಾದರೆ

ಕಂಟೆಂಟ್, ಈ ಕೆಳಗೆ ಸೂಚಿಸಿದ ಯಾವುದೇ ವಿವರಣೆಗಳಿಗೆ ಹೊಂದಿಕೆಯಾಗುತ್ತಿದ್ದರೆ, ಅದನ್ನು YouTube ನಲ್ಲಿ ಪೋಸ್ಟ್ ಮಾಡಬೇಡಿ.

  • ಯಾರೊಬ್ಬರ ಅಂತರ್ಗತ ಗುಣಲಕ್ಷಣಗಳನ್ನು ಆಧರಿಸಿದ ಸುದೀರ್ಘವಾದ ಅವಮಾನಗಳು ಅಥವಾ ನಿಂದನೆಗಳನ್ನು ಒಳಗೊಂಡಿರುವ ಕಂಟೆಂಟ್. ಈ ಗುಣಲಕ್ಷಣಗಳಲ್ಲಿ ಅವರ ಸಂರಕ್ಷಿತ ಗುಂಪಿನ ಸ್ಥಿತಿ, ದೈಹಿಕ ಗುಣಲಕ್ಷಣಗಳು, ಅಥವಾ ಲೈಂಗಿಕ ದಾಳಿ, ಖಾಸಗಿ ಕ್ಷಣಗಳ ಒಪ್ಪಿಗೆಯಿಲ್ಲದ ಚಿತ್ರಣದ ವಿತರಣೆ, ಕೌಟುಂಬಿಕ ಹಿಂಸೆ, ಶಿಶು ದೌರ್ಜನ್ಯವನ್ನು ಅನುಭವಿಸಿದವರಾಗಿ ಅವರ ಸ್ಥಿತಿ ಮತ್ತು ಇನ್ನಷ್ಟು ಸೇರಿವೆ.
  • ಅಪ್ರಾಪ್ತರನ್ನು ಲಜ್ಜಿತರಾಗಿಸುವ, ವಂಚಿಸುವ ಅಥವಾ ಅವಮಾನಿಸುವ ಉದ್ದೇಶದೊಂದಿಗೆ ಅಪ್‌ಲೋಡ್ ಮಾಡಲಾದ ಕಂಟೆಂಟ್. ಇದರರ್ಥ, ಅಪ್ರಾಪ್ತ ವಯಸ್ಕರಿಗೆ ದುಃಖ, ಅವಮಾನ ಅಥವಾ ನಿಷ್ಪ್ರಯೋಜಕತೆಯಂತಹ ಅಹಿತಕರ ಭಾವನೆಗಳನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿರುವುದು; ತಮ್ಮನ್ನು ಅಥವಾ ಅವರ ಆಸ್ತಿಗೆ ಹಾನಿಯುಂಟುಮಾಡುವ ರೀತಿಯಲ್ಲಿ ವರ್ತಿಸುವಂತೆ ಅವರನ್ನು ಮೋಸಗೊಳಿಸುವ ಉದ್ದೇಶವನ್ನು ಹೊಂದಿರುವುದು; ಅಥವಾ ಅವರನ್ನು ನಿಂದಿಸುವುದು. ಅಪ್ರಾಪ್ತ ವಯಸ್ಕರು ಎಂದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ಈ ನೀತಿಯನ್ನು ಉಲ್ಲಂಘಿಸುವ ಇತರ ರೀತಿಯ ಕಂಟೆಂಟ್
  • ಸಾರ್ವಜನಿಕವಲ್ಲದ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು (PII) ಹಂಚಿಕೊಳ್ಳುವ, ಹಂಚಿಕೊಳ್ಳುವ ಬೆದರಿಕೆ ಹಾಕುವ ಅಥವಾ ಹಂಚಿಕೊಳ್ಳಲು ಇತರರನ್ನು ಪ್ರೋತ್ಸಾಹಿಸುವ ಕಂಟೆಂಟ್. 
    • PII ಇವುಗಳನ್ನು ಒಳಗೊಂಡಿದೆ, ಆದರೆ ಇವುಗಳಿಗೆ ಸೀಮಿತವಾಗಿಲ್ಲ; ಮನೆ ವಿಳಾಸಗಳು; ಇಮೇಲ್ ವಿಳಾಸಗಳು; ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್‌ನಂತಹ ಸೈನ್-ಇನ್ ರುಜುವಾತುಗಳು; ಫೋನ್ ಸಂಖ್ಯೆಗಳು; ಪಾಸ್‌ಪೋರ್ಟ್ ಸಂಖ್ಯೆಗಳು; ವೈದ್ಯಕೀಯ ದಾಖಲೆಗಳು; ಅಥವಾ ಬ್ಯಾಂಕ್ ಖಾತೆ ಮಾಹಿತಿ.
    • ಇದು ಒಬ್ಬ ಅಧಿಕಾರಿಯ ಅಧಿಕೃತ ಕಚೇರಿ ಫೋನ್ ಸಂಖ್ಯೆ ಅಥವಾ ಒಂದು ವ್ಯಾಪಾರದ ಫೋನ್ ಸಂಖ್ಯೆಯಂತಹ ವ್ಯಾಪಕವಾಗಿ ಲಭ್ಯವಿರುವ ಸಾರ್ವಜನಿಕ ಮಾಹಿತಿಯನ್ನು ಪೋಸ್ಟ್ ಮಾಡುವುದನ್ನು ಒಳಗೊಂಡಿರುವುದಿಲ್ಲ. 
    • ಈ ನೀತಿಯು, ನಿಮ್ಮ ಸ್ವಂತ PII ಅನ್ನು ಹಂಚಿಕೊಳ್ಳುವ, ಬೇರೊಬ್ಬರ PII ಅನ್ನು ಹಂಚಿಕೊಳ್ಳುವ ಮತ್ತು ನೀವು ಆಕಸ್ಮಿಕವಾಗಿ PII ಅನ್ನು ಹಂಚಿಕೊಳ್ಳುವ ಸಂದರ್ಭಗಳಿಗೆ ಅನ್ವಯಿಸುತ್ತದೆ.
    • ನಕಲಿ PII ಅನ್ನು ಹಂಚಿಕೊಳ್ಳಲಾದಾಗ ಕಂಟೆಂಟ್ ಸ್ಪಷ್ಟವಾಗಿ ಸೂಚಿಸಬೇಕು. ಉದಾಹರಣೆಗೆ, ತರಬೇತಿಯ ಭಾಗವಾಗಿ ನಕಲಿ ಲಾಗಿನ್ ರುಜುವಾತುಗಳನ್ನು ಬಳಸುವುದು.
  • ಬ್ರಿಗೇಡಿಂಗ್‌ನಂತಹ ನಿಂದನೀಯ ನಡವಳಿಕೆಯನ್ನು ಪ್ರೋತ್ಸಾಹಿಸುವ ಕಂಟೆಂಟ್. ಬ್ರಿಗೇಡಿಂಗ್ ಎಂದರೆ, ಒಬ್ಬ ವ್ಯಕ್ತಿಯು YouTube ನಲ್ಲಿ ಅಥವಾ ಹೊರಗೆ ಗುರುತಿಸಬಲ್ಲ ವ್ಯಕ್ತಿಯ ಸಂಘಟಿತ ನಿಂದನೆಯನ್ನು ಪ್ರೋತ್ಸಾಹಿಸುವುದಾಗಿದೆ.
  • ಹಾನಿಕಾರಕ ವ್ಯವಸ್ಥಿತ ಪಿತೂರಿಗಳನ್ನು ಪ್ರಚಾರ ಮಾಡುವ ಅಥವಾ ವ್ಯಕ್ತಿಯೊಬ್ಬರು ಹಾನಿಕಾರಕ ವ್ಯವಸ್ಥಿತ ಪಿತೂರಿಯ ಭಾಗವಾಗಿದ್ದಾರೆ ಎಂಬ ಪ್ರತಿಪಾದನೆಗೆ ಅವರನ್ನು ಗುರಿಯಾಗಿಸುವ ಕಂಟೆಂಟ್. ಹಾನಿಕಾರಕ ವ್ಯವಸ್ಥಿತ ಪಿತೂರಿಯು ನೇರ ಬೆದರಿಕೆಗಳು ಅಥವಾ ಹಿಂಸಾತ್ಮಕ ಕೃತ್ಯಗಳಿಗೆ ಸಂಬಂಧಿಸಿರುವುದಾಗಿರುತ್ತದೆ.
  • ಗುರುತಿಸಬಲ್ಲ ವ್ಯಕ್ತಿ ಅಥವಾ ಅವರ ಆಸ್ತಿಗೆ ಬೆದರಿಕೆ ಹಾಕುವ ಕಂಟೆಂಟ್. ಉದಾಹರಣೆಗೆ, ಇದು ಸಮಯ ಅಥವಾ ಸ್ಥಳವನ್ನು ನಿರ್ದಿಷ್ಟಪಡಿಸದ, ಆದರೆ ಆಯುಧವನ್ನು ತೋರಿಸಿರಬಹುದಾದ ಸೂಚ್ಯ ಬೆದರಿಕೆಗಳನ್ನು ಒಳಗೊಂಡಿರುತ್ತದೆ.
  • ಗುರುತಿಸಬಲ್ಲ ವ್ಯಕ್ತಿಯೊಬ್ಬರು ಅಪ್ರಾಪ್ತರೊಂದಿಗೆ ಅತಿರೇಕದ ದುರ್ನಡತೆಯನ್ನು ತೋರಿದ್ದಾರೆ ಎಂದು ಆರೋಪಿಸುವುದಕ್ಕಾಗಿ ಬಳಸಲಾಗುವ, ಕಾನೂನು ಜಾರಿಗೊಳಿಸುವಿಕೆ ಅಧಿಕಾರಿಗಳು ಉಪಸ್ಥಿತರಿರದ ಪೂರ್ವಯೋಜಿತ ಭೇಟಿಯನ್ನು ತೋರಿಸುವ ಕಂಟೆಂಟ್.
  • ಗುರುತಿಸಬಲ್ಲ ವ್ಯಕ್ತಿಯೊಬ್ಬರ ಸಾವು ಅಥವಾ ಗಂಭೀರ ಗಾಯದ ಕುರಿತು ಸಂಭ್ರಮಿಸುವ ಅಥವಾ ತಮಾಷೆ ಮಾಡುವ ಕಂಟೆಂಟ್.
  • ಮೃತಪಟ್ಟ ಅಪ್ರಾಪ್ತ ವಯಸ್ಕರು ಅಥವಾ ಮಾರಣಾಂತಿಕ ಅಥವಾ ಉತ್ತಮವಾಗಿ ದಾಖಲಿತವಾಗಿರುವ ಪ್ರಮುಖ ಹಿಂಸಾತ್ಮಕ ಘಟನೆಗಳ ಸಂತ್ರಸ್ತರ ಸಾವು ಅಥವಾ ಅವರು ಅನುಭವಿಸಿದ ಹಿಂಸಾಚಾರವನ್ನು ವಿವರಿಸಿ ಅವರನ್ನು ನೈಜವೆನಿಸುವಂತೆ ಸಿಮ್ಯುಲೇಟ್ ಮಾಡುವ ಕಂಟೆಂಟ್.
  • ರಚನೆಕಾರರು ಇತರರ ವಿರುದ್ಧ ಗಂಭೀರ ಹಿಂಸೆಯ ಕೃತ್ಯಗಳನ್ನು ಸಿಮ್ಯುಲೇಟ್ ಮಾಡುತ್ತಿರುವುದನ್ನು ತೋರಿಸುವ ಕಂಟೆಂಟ್. ಉದಾಹರಣೆಗೆ, ಮರಣದಂಡನೆಗಳು, ಹಿಂಸೆ, ಅಂಗಚ್ಛೇದನ, ಹೊಡೆಯುವುದು ಮತ್ತು ಇನ್ನಷ್ಟು.
  • ಗುರುತಿಸಬಲ್ಲ ವ್ಯಕ್ತಿಯನ್ನು ಗೊತ್ತಿಲ್ಲದಂತೆ ಹಿಂಬಾಲಿಸುವುದನ್ನು ಒಳಗೊಂಡಿರುವ ಕಂಟೆಂಟ್.
  • ಉತ್ತಮವಾಗಿ ದಾಖಲಿಸಲಾದ, ಪ್ರಮುಖ ಹಿಂಸಾತ್ಮಕ ಘಟನೆಯ ಸಂತ್ರಸ್ತರಾಗಿ ಯಾರೊಬ್ಬರ ಪಾತ್ರವನ್ನು ನಿರಾಕರಿಸುವ ಅಥವಾ ಕಡಿಮೆ ಮಾಡುವ ಕಂಟೆಂಟ್.
  • ಗುರುತಿಸಬಲ್ಲ ವ್ಯಕ್ತಿಯನ್ನು ಅನಪೇಕ್ಷಿತವಾಗಿ ಲೈಂಗಿಕವಾಗಿ ಬಿಂಬಿಸುವುದನ್ನು ಒಳಗೊಂಡಿರುವ ಕಂಟೆಂಟ್. ಇದು ಇವುಗಳನ್ನು ಒಳಗೊಂಡಿದೆ:
    • ಯಾರನ್ನಾದರೂ ಅಸಭ್ಯ, ಅವಮಾನಕರ ಮತ್ತು ಲೈಂಗಿಕವಾಗಿ ಅಶ್ಲೀಲವಾದ ರೀತಿಯಲ್ಲಿ ವರ್ಣಿಸುವ ಕಂಟೆಂಟ್
    • ಖಾಸಗಿ ಕ್ಷಣಗಳ ಒಪ್ಪಿಗೆಯಿಲ್ಲದ ಚಿತ್ರಣವನ್ನು ಹಂಚಿಕೊಳ್ಳುವ, ವಿನಂತಿಸುವ ಅಥವಾ ಅದನ್ನು ಹೇಗೆ ವಿತರಿಸಬೇಕು ಎಂಬುದನ್ನು ತೋರಿಸುವ ಕಂಟೆಂಟ್
    • ಲೈಂಗಿಕ ದೌರ್ಜನ್ಯ ಎಸಗುವ ಕುರಿತು ಕಲ್ಪಿಸಿಕೊಳ್ಳುವ, ಬೆದರಿಕೆ ಒಡ್ಡುವ ಅಥವಾ ಅದನ್ನು ಬೆಂಬಲಿಸುವ ಕಂಟೆಂಟ್

ಈ ನೀತಿಯು ವೀಡಿಯೊಗಳು, ವೀಡಿಯೊ ವಿವರಣೆಗಳು, ಕಾಮೆಂಟ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಇತರ ಯಾವುದೇ YouTube ಉತ್ಪನ್ನ ಅಥವಾ ಫೀಚರ್‌ಗಳಿಗೆ ಅನ್ವಯಿಸುತ್ತದೆ. ಇದು ಸಂಪೂರ್ಣ ಪಟ್ಟಿಯಲ್ಲ ಎಂಬುದು ನೆನಪಿರಲಿ. ಈ ನೀತಿಗಳು, ನಿಮ್ಮ ಕಂಟೆಂಟ್‌ನಲ್ಲಿನ ಬಾಹ್ಯ ಲಿಂಕ್‌ಗಳಿಗೆ ಸಹ ಅನ್ವಯಿಸುತ್ತವೆ ಎಂಬುದನ್ನು ಗಮನಿಸಿ. ಕ್ಲಿಕ್ ಮಾಡಬಹುದಾದ URL ಗಳು, ವೀಡಿಯೊದಲ್ಲಿ ಇತರ ಸೈಟ್‌ಗಳಿಗೆ ಬಳಕೆದಾರರನ್ನು ಮೌಖಿಕವಾಗಿ ನಿರ್ದೇಶಿಸುವುದು ಮತ್ತು ಇತರ ವಿಧಾನಗಳು ಇದರಲ್ಲಿ ಒಳಗೊಂಡಿವೆ.

ವಿನಾಯಿತಿಗಳು

ಒಂದು ವೇಳೆ ಪ್ರಾಥಮಿಕ ಉದ್ದೇಶವು ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕವಾಗಿದ್ದರೆ, ಕಿರುಕುಳವನ್ನು ಒಳಗೊಂಡಿರುವ ಕಂಟೆಂಟ್ ಅನ್ನು ನಾವು ಅನುಮತಿಸಬಹುದು. ಈ ವಿನಾಯಿತಿಗಳು ಯಾರಿಗಾದರೂ ಕಿರುಕುಳ ನೀಡಲು ರಹದಾರಿಯಲ್ಲ. ಕೆಲವು ಉದಾಹರಣೆಗಳು ಹೀಗಿವೆ:

  • ಉನ್ನತ ದರ್ಜೆಯ ಅಧಿಕಾರಿಗಳು ಅಥವಾ ನಾಯಕರಿಗೆ ಸಂಬಂಧಿಸಿದ ಚರ್ಚೆಗಳು: ಉನ್ನತ ದರ್ಜೆಯ ಸರಕಾರಿ ಅಧಿಕಾರಿಗಳು ಅಥವಾ ಪ್ರಮುಖ ಮಲ್ಟಿನ್ಯಾಶನಲ್ ಕಂಪನಿಗಳ CEO ಗಳ ಹಾಗೆ ಅಧಿಕಾರದ ಸ್ಥಾನಗಳಲ್ಲಿರುವ ವ್ಯಕ್ತಿಗಳಿಗೆ ಸಂಬಂಧಪಟ್ಟ ವಿಷಯವಸ್ತುಗಳ ಕುರಿತಾದ ಡಿಬೇಟ್‌ಗಳು ಅಥವಾ ಚರ್ಚೆಗಳನ್ನು ಒಳಗೊಂಡಿರುವ ಕಂಟೆಂಟ್.
  • ಸ್ಕ್ರಿಪ್ಟ್ ಮಾಡಲಾದ ಪ್ರದರ್ಶನಗಳು: ಸ್ಕ್ರಿಪ್ಟ್ ಮಾಡಿರುವ ವ್ಯಂಗ್ಯ, ಸ್ಟ್ಯಾಂಡ್-ಅಪ್ ಕಾಮಿಡಿ, ಅಥವಾ ಸಂಗೀತದಂತಹ (ಉದಾಹರಣೆಗೆ ಡಿಸ್ ಟ್ರ್ಯಾಕ್) ಕಲಾತ್ಮಕ ಮಾಧ್ಯಮದ ಸಂದರ್ಭದಲ್ಲಿ ಮಾಡಲಾದ ಅವಮಾನಗಳು. ಗಮನಿಸಿ: ಈ ವಿನಾಯಿತಿಯು, ಯಾರಿಗಾದರೂ ಕಿರುಕುಳ ನೀಡುವುದು ಮತ್ತು “ನಾನು ಜೋಕ್ ಮಾಡುತ್ತಿದ್ದೆ” ಎನ್ನುವುದಕ್ಕೆ ರಹದಾರಿಯಲ್ಲ.
  • ಕಿರುಕುಳದ ಕುರಿತು ಶಿಕ್ಷಣ ಅಥವಾ ಅರಿವು: ಸೈಬರ್ ನಿಂದನೆಯ ವಿರುದ್ಧ ಹೋರಾಡಲು ಅಥವಾ ಅರಿವು ಮೂಡಿಸಲು, ಡಾಕ್ಯುಮೆಂಟರಿಯ ಉದ್ದೇಶಗಳಿಗಾಗಿ ಅಥವಾ ಸಿದ್ಧರಿರುವ ಭಾಗಿಗಳೊಂದಿಗೆ (ನಟರ ಹಾಗೆ) ನೈಜ ಅಥವಾ ಸಿಮ್ಯುಲೇಟ್ ಮಾಡಲಾದ ಕಿರುಕುಳವನ್ನು ಒಳಗೊಂಡಿರುವ ಕಂಟೆಂಟ್.

ಗಮನಿಸಿ: ಒಬ್ಬ ವ್ಯಕ್ತಿಯು ಉನ್ನತ ಸ್ಥಾನದಲ್ಲಿರುವವರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಅವರ ಸಂರಕ್ಷಿತ ಗುಂಪಿನ ಸ್ಥಿತಿಯ ಆಧಾರದಲ್ಲಿ ಅವರನ್ನು ದುರುದ್ದೇಶಪೂರಿತವಾಗಿ ಅವಮಾನಿಸುವ ಕಂಟೆಂಟ್‌ನ ಕುರಿತು ನಾವು ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ.

ಮಾನಿಟೈಸೇಶನ್ ಮತ್ತು ಇತರ ದಂಡನೆಗಳು

ಕೆಲವು ವಿರಳ ಪ್ರಕರಣಗಳಲ್ಲಿ, ರಚನೆಕಾರರು ಹೀಗೆ ಮಾಡಿದಾಗ, ನಾವು ಕಂಟೆಂಟ್ ಅನ್ನು ತೆಗೆದುಹಾಕಬಹುದು ಅಥವಾ ಇತರ ದಂಡನೆಗಳನ್ನು ಜಾರಿಗೊಳಿಸಬಹುದು:

  • ಪ್ರೇಕ್ಷಕರ ದುರ್ವರ್ತನೆಯನ್ನು ಪುನರಾವರ್ತಿತವಾಗಿ ಪ್ರೋತ್ಸಾಹಿಸುವುದು.
  • ಅನೇಕ ಅಪ್‌ಲೋಡ್‌ಗಳಾದ್ಯಂತ, ಗುರುತಿಸಬಲ್ಲ ವ್ಯಕ್ತಿಯ ಅಂತರ್ಗತ ಗುಣಲಕ್ಷಣಗಳ ಆಧಾರದಲ್ಲಿ ಅವರನ್ನು ಪುನರಾವರ್ತಿತವಾಗಿ ಗುರಿಪಡಿಸುವುದು, ಅವಮಾನಿಸುವುದು ಮತ್ತು ನಿಂದನೆ ಮಾಡುವುದು.
  • ಸ್ಥಳೀಯ ಸಾಮಾಜಿಕ ಅಥವಾ ರಾಜಕೀಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯನ್ನು ದೈಹಿಕ ಹಾನಿಯ ಅಪಾಯಗಳಿಗೆ ಒಡ್ಡುವುದು.
  • ವೈಯಕ್ತಿಕ ಆರ್ಥಿಕ ಲಾಭಕ್ಕಾಗಿ, ರಚನೆಕಾರರ ನಡುವೆ ನಿರಂತರವಾಗಿ ಹಗೆತನವನ್ನು ಬಿತ್ತುವ ಮೂಲಕ YouTube ನ ಪರಿಸರಕ್ಕೆ ಹಾನಿ ಮಾಡುವ ಕಂಟೆಂಟ್ ಅನ್ನು ರಚಿಸುವುದು.

ಉದಾಹರಣೆಗಳು

YouTube ನಲ್ಲಿ ಅನುಮತಿಯಿಲ್ಲದ ಕಂಟೆಂಟ್‌ನ ಕೆಲವೊಂದು ಉದಾಹರಣೆಗಳು ಇಲ್ಲಿವೆ:

  • ಪುನರಾವರ್ತಿತವಾಗಿ ಯಾರದಾದರೂ ಚಿತ್ರವನ್ನು ತೋರಿಸಿ, “ಈ ಕ್ರಿಮಿಯ ಹಲ್ಲುಗಳನ್ನು ನೋಡಿ, ಅವು ಎಷ್ಟು ಕೆಟ್ಟದಾಗಿವೆ!” ಎಂಬಂತಹ ಹೇಳಿಕೆಗಳನ್ನು ನೀಡುವುದು, ಜೊತೆಗೆ ವೀಡಿಯೊದಾದ್ಯಂತ ಅಂತರ್ಗತ ಗುಣಲಕ್ಷಣಗಳನ್ನು ಗುರಿಯಾಗಿಸುವ ಇದೇ ರೀತಿಯ ಕಾಮೆಂಟ್‌ಗಳನ್ನು ಮಾಡುವುದು.
  • ಒಬ್ಬ ವ್ಯಕ್ತಿಯ ಸಂರಕ್ಷಿತ ಗುಂಪಿನ ಸದಸ್ಯತ್ವವನ್ನು ಆಧರಿಸಿ ಅವರನ್ನು ಗುರಿಯಾಗಿಸುವುದು, ಉದಾಹರಣೆಗೆ ಈ ರೀತಿಯ ಮಾತುಗಳನ್ನು ಹೇಳುವುದು: "ಈ [ಸಂರಕ್ಷಿತ ಗುಂಪನ್ನು ಗುರಿಯಾಗಿಸುವ ನಿಂದೆ] ಅನ್ನು ನೋಡಿ!"
  • ಒಂದು ಹಾನಿಕಾರಕ ವ್ಯವಸ್ಥಿತ ಪಿತೂರಿಯ, ಮತ್ತು ಆ ಪಿತೂರಿಯು ನೇರ ಬೆದರಿಕೆಗಳು ಅಥವಾ ಹಿಂಸಾತ್ಮಕ ಕೃತ್ಯಗಳಿಗೆ ಸಂಬಂಧಪಟ್ಟಿರುವ ಸಂದರ್ಭದಲ್ಲಿ, ಒಬ್ಬ ವ್ಯಕ್ತಿಯನ್ನು ಗುರಿಯಾಗಿಸುವುದು ಮತ್ತು ಅವರು ಮಾನವ ಕಳ್ಳಸಾಗಾಣಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಪ್ರತಿಪಾದನೆಗಳನ್ನು ಮಾಡುವುದು.
  • ಒಬ್ಬ ವ್ಯಕ್ತಿಯ ಅಂತರ್ಗತ ಗುಣಲಕ್ಷಣಗಳನ್ನು ಆಧರಿಸಿ, ಅವರನ್ನು ತೇಜೋವಧೆ ಮಾಡಲು ಅತಿಯಾದ ಅವಮಾನವನ್ನು ಬಳಸುವುದು. ಉದಾಹರಣೆಗೆ: “ಈ ನಾಯಿಯಂತಹ ಮಹಿಳೆಯನ್ನು ನೋಡಿ! ಆಕೆ ಮನುಷ್ಯೆಯೇ ಅಲ್ಲ — ಅವಳು ಒಂದು ರೀತಿಯ ರೂಪಾಂತರಿ ಅಥವಾ ಪ್ರಾಣಿ ಇರಬೇಕು!”
  • ಒಬ್ಬ ವ್ಯಕ್ತಿಯನ್ನು ಗುರಿಯಾಗಿಸುವುದು ಮತ್ತು ಅವರ ಸಾವು ಅಥವಾ ಗಂಭೀರವಾದ ಗಾಯದ ಆಶಯವನ್ನು ವ್ಯಕ್ತಪಡಿಸುವುದು: “ನಾನು ಆಕೆಯನ್ನು ತುಂಬಾ ದ್ವೇಷಿಸುತ್ತೇನೆ. ಆಕೆ ಒಂದು ಟ್ರಕ್ ಡಿಕ್ಕಿ ಹೊಡೆದು ಸಾಯಲಿ ಎಂದು ನಾನು ಆಶಿಸುತ್ತೇನೆ.”
  • ಗುರುತಿಸಬಲ್ಲ ವ್ಯಕ್ತಿಯೊಬ್ಬರು ಕೊಲೆಗೀಡಾಗುವುದನ್ನು ಅಥವಾ ಗಂಭೀರವಾಗಿ ಗಾಯಗೊಳ್ಳುವುದನ್ನು ತೋರಿಸುವುದು. ಉದಾಹರಣೆಗೆ: ಒಂದು ವೀಡಿಯೊದಲ್ಲಿ ಚಲನಚಿತ್ರವೊಂದರ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ, ಅದರಲ್ಲಿ ಒಂದು ಪಾತ್ರವನ್ನು ಬರ್ಬರವಾಗಿ ಶೂಟ್ ಮಾಡಿ ಕೊಲ್ಲಲಾಗುತ್ತದೆ. ನಟನ ಚಿತ್ರದ ಮೇಲೆ ನಿಜವಾದ ವ್ಯಕ್ತಿಯೊಬ್ಬರ ಫೋಟೋವನ್ನು ಇರಿಸುವ ಹಾಗೆ ವೀಡಿಯೊವನ್ನು ಎಡಿಟ್ ಮಾಡಲಾಗಿದೆ.
  • ಯಾರದಾದರೂ ದೈಹಿಕ ಸುರಕ್ಷತೆಗೆ ಬೆದರಿಕೆಯೊಡ್ಡುವುದು. ಇದು "ಶನಿವಾರ ನೀನು ಸಿಕ್ಕಿದಾಗ, ನಾನು ನಿನ್ನನ್ನು ಕೊಲ್ಲುತ್ತೇನೆ" ಎಂಬಂತಹ ಸ್ಪಷ್ಟ ಬೆದರಿಕೆಗಳನ್ನು ಒಳಗೊಂಡಿರುತ್ತದೆ. ಇದು ಆಯುಧವನ್ನು ಝಳಪಿಸಿಕೊಂಡು, "ಮುಂದೆ ಬಂದರೆ ಚೆನ್ನಾಗಿರಲ್ಲ, ನಾನು ನಿಮಗಾಗಿ ಬರುತ್ತಿದ್ದೇನೆ" ಎಂಬಂತಹ ಮಾತುಗಳನ್ನು ಹೇಳುವ ಮೂಲಕ ಹಿಂಸೆಯನ್ನು ಸೂಚಿಸುವುದನ್ನು ಒಳಗೊಂಡಿರುತ್ತದೆ.
  • ವ್ಯಕ್ತಿಯ ಕಡೆಗೆ ನಿಂದನೀಯ ಗಮನ ಅಥವಾ ಟ್ರಾಫಿಕ್ ಅನ್ನು ನಿರ್ದೇಶಿಸಲು ಅವರ ಫೋನ್ ಸಂಖ್ಯೆ, ಮನೆ ವಿಳಾಸ ಅಥವಾ ಇಮೇಲ್ ವಿಳಾಸದಂತಹ ಸಾರ್ವಜನಿಕವಲ್ಲದ ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯನ್ನು ಪೋಸ್ಟ್ ಮಾಡುವುದು. ಉದಾಹರಣೆಗೆ, "ನನಗೆ ಅವರ ಫೋನ್ ಸಂಖ್ಯೆ ಸಿಕ್ಕಿದೆ. ಕರೆ ಮಾಡುತ್ತಾ ಇರಿ ಮತ್ತು ಸಂದೇಶ ಕಳುಹಿಸುತ್ತಾ ಇರಿ, ಅವರು ಉತ್ತರಿಸುವವರೆಗೆ ಬಿಡಬೇಡಿ!”
  • ಗೇಮ್‌ನಲ್ಲಿ ಧ್ವನಿ ಚಾಟ್ ಅಥವಾ ಸ್ಟ್ರೀಮ್‌ನ ಸಂದರ್ಭದಲ್ಲಿ ಸಂದೇಶಗಳ ಮೂಲಕ, ಗುರುತಿಸಬಲ್ಲ ವ್ಯಕ್ತಿಗಳನ್ನು “ರೇಡ್ ಮಾಡುವುದು” ಅಥವಾ ದುರುದ್ದೇಶಪೂರಿತ ನಿಂದನೆಯನ್ನು ಕಳುಹಿಸುವುದು.
  • ಮತ್ತೊಬ್ಬ ರಚನೆಕಾರರ ಕಾಮೆಂಟ್ ವಿಭಾಗದಲ್ಲಿ ನಿಂದನೀಯ ಕಾಮೆಂಟ್‌ಗಳನ್ನು ನೀಡುವಂತೆ ಬಳಕೆದಾರರಿಗೆ ನಿರ್ದೇಶಿಸುವುದು.
  • ಖಾಸಗಿ ಕ್ಷಣಗಳ ಒಪ್ಪಿಗೆಯಿಲ್ಲದ ಚಿತ್ರಣವನ್ನು ಹೋಸ್ಟ್ ಮಾಡುವ ಅಥವಾ ಫೀಚರ್ ಮಾಡುವ ಪ್ಲ್ಯಾಟ್‌ಫಾರ್ಮ್-ಹೊರಗಿನ ಸೈಟ್‌ಗಳಿಗೆ ಲಿಂಕ್ ಮಾಡುವುದು.
  • ಖಾಸಗಿ ಕ್ಷಣಗಳ ಒಪ್ಪಿಗೆಯಿಲ್ಲದ ಚಿತ್ರಣವನ್ನು ಹಂಚಿಕೊಳ್ಳುವುದಕ್ಕಾಗಿ ಇತರ ಬಳಕೆದಾರರು ಸಂಪರ್ಕಿಸಬೇಕೆಂದು ವಿನಂತಿಸುವುದು.
  • “ಸ್ವಾಟ್ ಮಾಡುವುದು” ಅಥವಾ ತುರ್ತು ಅಥವಾ ಆಪತ್ಕಾಲದ ಪ್ರತಿಸ್ಪಂದನೆ ಸೇವೆಗಳಿಗೆ ಇತರ ಪ್ರಾಂಕ್ ಕರೆಗಳನ್ನು ಮಾಡುವುದು ಅಥವಾ ಇದರಲ್ಲಿ ಅಥವಾ ಇದೇ ರೀತಿಯಲ್ಲಿ ಕಿರುಕುಳ ನೀಡುವ ಇತರ ವರ್ತನೆಯಲ್ಲಿ ತೊಡಗಿಸಿಕೊಳ್ಳಲು ವೀಕ್ಷಕರನ್ನು ಪ್ರೋತ್ಸಾಹಿಸುವುದು.
  • ಬಳಕೆದಾರರನ್ನು ಗೊತ್ತಿಲ್ಲದಂತೆ ಹಿಂಬಾಲಿಸುವುದು ಅಥವಾ ಬ್ಲಾಕ್‌ಮೇಲ್ ಮಾಡಲು ಪ್ರಯತ್ನಿಸುವುದು.
  • ವ್ಯಕ್ತಿಯ ವಿರುದ್ಧ ಹಿಂಸಾಚಾರವನ್ನು ಪ್ರಚಾರ ಮಾಡಲು ಅಭಿವೃದ್ಧಿಪಡಿಸಲಾದ ಅಥವಾ ಮಾರ್ಪಡಿಸಲಾದ ("ಮಾರ್ಪಾಟು ಮಾಡಲಾದ") ವೀಡಿಯೊ ಗೇಮ್ ಕಂಟೆಂಟ್.

ಈ ಪಟ್ಟಿಯು ಸಮಗ್ರವಾಗಿಲ್ಲ ಎಂಬುದು ನೆನಪಿರಲಿ. ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಬಹುದು ಎಂದು ನಿಮಗೆ ಅನಿಸಿದರೆ, ಅದನ್ನು ಪೋಸ್ಟ್ ಮಾಡಬೇಡಿ.

ಕಂಟೆಂಟ್, ಈ ನೀತಿಯನ್ನು ಉಲ್ಲಂಘಿಸಿದರೆ ಏನಾಗುತ್ತದೆ

ನಿಮ್ಮ ಕಂಟೆಂಟ್ ಈ ನೀತಿಯನ್ನು ಉಲ್ಲಂಘಿಸಿದರೆ, ನಾವು ಕಂಟೆಂಟ್ ಅನ್ನು ತೆಗೆದುಹಾಕುತ್ತೇವೆ ಮತ್ತು ನಿಮಗೆ ತಿಳಿಸಲು ಇಮೇಲ್ ಕಳುಹಿಸುತ್ತೇವೆ. ನೀವು ಪೋಸ್ಟ್ ಮಾಡಿದ ಲಿಂಕ್ ಸುರಕ್ಷಿತವಾಗಿದೆ ಎಂದು ದೃಢೀಕರಿಸಲು ನಮಗೆ ಸಾಧ್ಯವಾಗದಿದ್ದರೆ, ನಾವು ಲಿಂಕ್ ಅನ್ನು ತೆಗೆದುಹಾಕಬಹುದು. ವೀಡಿಯೊದಲ್ಲಿ ಅಥವಾ ವೀಡಿಯೊ ಮೆಟಾಡೇಟಾದಲ್ಲಿ ಪೋಸ್ಟ್ ಮಾಡಲಾದ ಉಲ್ಲಂಘನೀಯ URL ಗಳು ವೀಡಿಯೊವನ್ನು ತೆಗೆದುಹಾಕಲು ಕಾರಣವಾಗಬಹುದು ಎಂಬುದನ್ನು ಗಮನಿಸಿ.

ಇದೇ ಮೊದಲ ಬಾರಿ ನೀವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದರೆ, ನಿಮ್ಮ ಚಾನಲ್‌ಗೆ ಯಾವುದೇ ದಂಡನೆಯಿಲ್ಲದೆ, ನೀವು ನಮ್ಮಿಂದ ಎಚ್ಚರಿಕೆಯನ್ನು ಸ್ವೀಕರಿಸಬಹುದು. ಪಾಲಿಸಿ ತರಬೇತಿಯನ್ನು ತೆಗೆದುಕೊಂಡು 90 ದಿನಗಳ ನಂತರ ಎಚ್ಚರಿಕೆಯ ಅವಧಿ ಮುಗಿಯಲು ಅನುಮತಿಸುವ ಅವಕಾಶ ನಿಮಗೆ ಇರುತ್ತದೆ. ಆದರೂ, ಆ 90 ದಿನಗಳ ಅವಧಿಯೊಳಗೆ ಅದೇ ನೀತಿಯನ್ನು ಉಲ್ಲಂಘಿಸಿದರೆ, ಎಚ್ಚರಿಕೆಯ ಅವಧಿ ಮುಗಿಯುವುದಿಲ್ಲ ಮತ್ತು ನಿಮ್ಮ ಚಾನಲ್‌ಗೆ ಸ್ಟ್ರೈಕ್ ನೀಡಲಾಗುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ.

90 ದಿನಗಳ ಒಳಗೆ ನೀವು 3 ಸ್ಟ್ರೈಕ್‌ಗಳನ್ನು ಪಡೆದರೆ, ನಿಮ್ಮ ಚಾನಲ್ ಅನ್ನು ಕೊನೆಗೊಳಿಸಲಾಗುವುದು. ನಮ್ಮ ಸ್ಟ್ರೈಕ್‌ಗಳ ವ್ಯವಸ್ಥೆಯ ಕುರಿತು ಇನ್ನಷ್ಟು ತಿಳಿಯಿರಿ.

ಸಮುದಾಯ ಮಾರ್ಗಸೂಚಿಗಳು ಅಥವಾ ಸೇವಾ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ನಿಮ್ಮ ಚಾನಲ್ ಅಥವಾ ಖಾತೆಯನ್ನು ನಾವು ಕೊನೆಗೊಳಿಸಬಹುದು. ತೀವ್ರ ದುರುಪಯೋಗದ ಏಕೈಕ ಪ್ರಕರಣದ ನಂತರ ಅಥವಾ ನಿಯಮಾವಳಿ ಉಲ್ಲಂಘನೆಯಾಗುವುದಕ್ಕೆ ಚಾನಲ್ ಸಮರ್ಪಿತವಾಗಿದ್ದಾಗಲೂ ಸಹ ನಿಮ್ಮ ಚಾನಲ್ ಅನ್ನು ನಾವು ಕೊನೆಗೊಳಿಸಬಹುದು. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು. ಚಾನಲ್ ಅಥವಾ ಖಾತೆ ಕೊನೆಗೊಳಿಸುವಿಕೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11638933196943798838
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false